
ಬೆಂಗಳೂರು: ನಟ ದರ್ಶನ್‌ಗೆ ಸಂಬಂಧಿಸಿದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ವಿಚಾರಣೆಯಲ್ಲಿ ನಟ ಯಶಸ್ ಸೂರ್ಯ ನೀಡಿದ ಹೇಳಿಕೆ ಕುತೂಹಲ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟರಾದ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಇಂದು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನೀಡಿದ್ದಾರೆ. ದರ್ಶನ್ ಸೇರಿದಂತೆ ಹಲವರು ಭಾಗವಹಿಸಿದ್ದ ಎನ್ನಲಾದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನ ಪಾರ್ಟಿಯಲ್ಲಿ ನಡೆದ ಬೆಳವಣಿಗೆಗಳ ಕುರಿತು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಲಾಗಿದೆ.
ಸ್ಟೋನಿ ಬ್ರೂಕ್ ಪಾರ್ಟಿಯಲ್ಲಿ ಸಿನಿಮಾ ಚರ್ಚೆ!
ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ದರ್ಶನ್, ಪ್ರದೂಷ್, ಚಿಕ್ಕಣ್ಣ, ನಾಗರಾಜ್ ಮತ್ತು ವಿನಯ್ ಇದ್ದರು ಎಂದು ಯಶಸ್ ಸೂರ್ಯ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಅಂದು ಸಿನಿಮಾ ವಿಚಾರವಾಗಿ ಮಾತುಕತೆ ನಡೆಸಿದ್ದಾಗಿ ಅವರು ತಿಳಿಸಿದ್ದಾರೆ. ಆದರೆ, ಆರೋಪಿ ಪವನ್ ರೆಸ್ಟೋರೆಂಟ್‌ಗೆ ಬಂದಿದ್ದರ ಬಗ್ಗೆ ತನಗೆ ಗೊತ್ತಿಲ್ಲ ಎಂದು ಯಶಸ್ ಸೂರ್ಯ ಹೇಳಿರುವುದಾಗಿ ವರದಿಯಾಗಿದೆ. ಆ ಸಂದರ್ಭದಲ್ಲಿ ತಾನು ಹೊರಗಡೆ ಇದ್ದೆ ಎಂಬುದಾಗಿಯೂ ಅವರು ಹೇಳಿಕೆ ನೀಡಿದ್ದಾರೆ.
ಯಶಸ್ ಸೂರ್ಯ ಹೇಳಿಕೆಗೆ ಎಸ್‌ಪಿಪಿ ಆಕ್ಷೇಪ
ಯಶಸ್ ಸೂರ್ಯ ನೀಡಿದ ಹೇಳಿಕೆಗೆ ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಪಿ) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಕ್ಷಿಯನ್ನು ಭಾಗಶಃ ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ, ಅವರ ಹೇಳಿಕೆಯನ್ನು ಕ್ರಾಸ್ ಎಕ್ಸಾಮಿನೇಷನ್ ಮಾಡುವುದಕ್ಕೂ ಅವಕಾಶ ಕೋರಿದ್ದಾರೆ. ಈ ಮನವಿಗೆ ನ್ಯಾಯಾಲಯ ಅನುಮತಿ ನೀಡಿದ್ದು, ಯಶಸ್ ಸೂರ್ಯ ಅವರನ್ನು ಪ್ರಶ್ನಿಸಲು ಎಸ್‌ಪಿಪಿ ಸಮಯಾವಕಾಶ ಕೋರಿದ್ದಾರೆ ಎಂದು ವರದಿಯಾಗಿದೆ.
ಸಾಕ್ಷಿ ಹೇಳಿಕೆ ವೇಳೆ ಚಿಕ್ಕಣ್ಣಗೆ ಆತಂಕ?
ಇದೇ ಪ್ರಕರಣದಲ್ಲಿ ಸಾಕ್ಷ್ಯ ನೀಡಿದ ನಟ ಚಿಕ್ಕಣ್ಣ ವಿಚಾರಣೆ ವೇಳೆ ಆತಂಕಗೊಂಡಿದ್ದರು ಎನ್ನಲಾಗಿದೆ. ಅವರು ಪದೇಪದೇ ಗೊಂದಲಕ್ಕೊಳಗಾದ ಹಿನ್ನೆಲೆಯಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ನ್ಯಾಯಾಲಯ ಸೂಚಿಸಿದೆ ಎಂದು ವರದಿಯಾಗಿದೆ. ಎಸ್‌ಪಿಪಿ ಕೂಡ ಚಿಕ್ಕಣ್ಣ ಅವರಿಗೆ ಸಮಾಧಾನ ಹೇಳಿ, ಆತಂಕಪಡದೆ ಹೇಳಿಕೆ ನೀಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ನಡೆದಿದ್ದ ಬೆಳವಣಿಗೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಮಹತ್ವ ಪಡೆಯಲಿವೆ. ಸಾಕ್ಷಿಗಳ ಹೇಳಿಕೆಗಳ ಕುರಿತು ನ್ಯಾಯಾಲಯದ ಅಂತಿಮ ಮೌಲ್ಯಮಾಪನದ ಬಳಿಕವೇ ಅವುಗಳ ಕಾನೂನು ಮಹತ್ವ ಸ್ಪಷ್ಟವಾಗಲಿದೆ.