
ಪಿಂಚಣಿ ಪಡೆಯುವ ನೌಕರರಿಗೆ ಸುಪ್ರೀಂ ಕೋರ್ಟ್ ಮಹತ್ವದ ರಿಲೀಫ್ ನೀಡಿದೆ.
ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿ ಬಳಿಕ ಕಾಯಂಗೊಂಡಿರುವ ನೌಕರರಿಗೆ ಕೇವಲ ತಾಂತ್ರಿಕ ಅಥವಾ ಆಡಳಿತಾತ್ಮಕ ಕಾರಣಗಳನ್ನು ಮುಂದಿಟ್ಟುಕೊಂಡು ಪಿಂಚಣಿ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನೌಕರರ ಹಿಂದಿನ ಸೇವೆಯನ್ನೂ ಪಿಂಚಣಿ ಲೆಕ್ಕಾಚಾರದಲ್ಲಿ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಗುತ್ತಿಗೆ, ತಾತ್ಕಾಲಿಕ ಅಥವಾ ದಿನಗೂಲಿ ನೌಕರರಾಗಿ ಕೆಲಸ ಮಾಡಿದ ಅವಧಿಯ ನಂತರ ಸೇವೆ ಕಾಯಂಗೊಂಡಿದ್ದರೆ, ಆ ಸೇವಾ ಅವಧಿಯನ್ನೂ ಪಿಂಚಣಿಗೆ ಅರ್ಹ ಸೇವೆಯಾಗಿ ಪರಿಗಣಿಸಬಹುದು ಎಂದು ಪೀಠ ತಿಳಿಸಿದೆ.
ಕೆಲವು ದಿನಗಳ ಸೇವಾ ವಿರಾಮ ಕೃತಕವಾಗಿ ಅಥವಾ ಆಡಳಿತಾತ್ಮಕ ಕಾರಣಗಳಿಂದ ಉಂಟಾಗಿದ್ದರೆ, ಅದನ್ನು ಮಾತ್ರ ಕಾರಣವನ್ನಾಗಿ ಮಾಡಿಕೊಂಡು ಪಿಂಚಣಿ ಸೌಲಭ್ಯದಿಂದ ನೌಕರರನ್ನು ಹೊರಗಿಡಬಾರದು ಎಂದಿದೆ.
ಪಿಂಚಣಿ ಅನುಕಂಪದ ಹಣವಲ್ಲ; ನೌಕರರು ಸಲ್ಲಿಸಿದ ಸೇವೆಗೆ ದೊರೆಯುವ ಪ್ರತಿಫಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ತೀರ್ಪಿನ ಮೂಲಕ ಪಂಜಾಬ್ ಶಾಲಾ ಶಿಕ್ಷಣ ಮಂಡಳಿಯ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಬರುವ ಅವಕಾಶವೂ ಸಿಕ್ಕಿದೆ.
ಒಟ್ಟಿನಲ್ಲಿ, ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರಿಗೆ ತಾಂತ್ರಿಕ ಕಾರಣಗಳಿಂದ ಪಿಂಚಣಿ ನಿರಾಕರಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ನ ಈ ತೀರ್ಪು ಮಹತ್ವ ಪಡೆದುಕೊಂಡಿದೆ.